ಕೆಲಾಗ್ ಒಪ್ಪಂದ

ಅಂತರರಾಷ್ಟ್ರೀಯ ವಿವಾದಗಳನ್ನೆಲ್ಲ ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕೆಂದು 1928ರ ಆಗಸ್ಟ್ 27ರಂದು ಸಹಿಯಾದ ಒಂದು ಒಪ್ಪಂದ. ಈ ಒಪ್ಪಂದ ಪ್ಯಾರಿಸಿನಲ್ಲಿ ಆಗಿದ್ದರಿಂದ ಇದನ್ನು ಪ್ಯಾರಿಸ್ ಒಪ್ಪಂದವೆಂದೂ ಅಮೆರಿಕದ ಸ್ಟೇಟ್ ಸೆಕ್ರೆಟರಿ ಫ್ರಾಂಕ್ ಬಿ. ಕೆಲಾಗನೂ (1856-1937) ಫ್ರಾನ್ಸಿನ ವಿದೇಶಾಂಗ ಮಂತ್ರಿ ಅರಿಸ್ಟೈಡ್ ಬ್ರೀಯಾನನೂ (1862-1932) ಮೂಲತಃ ಇದಕ್ಕೆ ಕಾರಣರಾದ್ದರಿಂದ ಕೆಲಾಗ್-ಬ್ರಿಯಾಂಡ್ ಒಪ್ಪಂದವೆಂದೂ ಇದು ಪ್ರಸಿದ್ಧವಾಗಿದೆ. 1927ರ ಏಪ್ರಿಲ್ ತಿಂಗಳಿನಲ್ಲಿ ಕೆಲಾಗನಿಗೆ ಬ್ರಿಯಾಂಡ್ ಈ ಬಗ್ಗೆ ಪ್ರಥಮತಃ ಸಲಹೆ ಮಾಡಿದ. ರಾಷ್ಟ್ರನೀತಿಯ ಸಾಧನೆಗಾಗಿ ಯುದ್ಧ ಮಾಡುವುದನ್ನು ನಿಷೇದಿಸಿ ತಮ್ಮೆರಡು ರಾಷ್ಟ್ರಗಳೂ ಒಪ್ಪಂದ ಮಾಡಿಕೊಳ್ಳಬೇಕೆಂದು ಬ್ರಿಯಾಂಡ್ ಸೂಚಿಸಿದ. ಈ ಒಪ್ಪಂದ ದ್ವಿಮುಖವಾಗಿರಬಾರದೆಂದೂ ಬಹುಮುಖವಾದ್ದಾಗಿರಬೇಕೆಂದೂ ಇದು ಎಷ್ಟು ಹೆಚ್ಚು ವ್ಯಾಪಕವಾದರೆ ಜಗತ್ತಿನಲ್ಲಿ ಅಷ್ಟರ ಮಟ್ಟಿಗೆ ಶಾಂತಿ ಸಾಧಿಸುವುದೆಂದೂ ಕೆಲಾಗ್ ಅಭಿಪ್ರಾಯಪಟ್ಟ. ಅಂತೆಯೇ ಆಗಸ್ಟ್ 1928ರಲ್ಲಿ ಒಂಬತ್ತು ರಾಷ್ಟ್ರಗಳ ಸಮ್ಮೇಳನವೊಂದು ಪ್ಯಾರಿಸಿನಲ್ಲಿ ಸೇರಿ, ಬ್ರೀಯಾನನ ಮೂಲ ಸೂಚನೆಯಂತೆ ಯುದ್ಧವನ್ನು ನಿಷೇಧಿಸಿತು. ಆದರೆ ಒಪ್ಪಂದಕ್ಕೆ ಸಹಿ ಹಾಕಿದ ಯಾವುದೇ ರಾಷ್ಟ್ರ ಸ್ವಹಿತರಕ್ಷಣೆಗಾಗಿ ಯುದ್ಧ ಮಾಡುವುದು ತಪ್ಪಲ್ಲವೆಂದೂ ಒಪ್ಪಿಕೊಂಡಿತು.

ಇನ್ನೂ ಅನೇಕ ರಾಷ್ಟ್ರಗಳು ಶೀಘ್ರವಾಗಿ ಈ ಒಪ್ಪಂದಕ್ಕೆ ಅನುಮೋದನೆ ನೀಡಿದುವು. ಒಟ್ಟಿನಲ್ಲಿ ಇದಕ್ಕೆ ಸಹಿ ಹಾಕಿದ ರಾಷ್ಟ್ರಗಳ ಸಂಖ್ಯೆ 63. ಈ ಒಪ್ಪಂದ ಅತ್ಯಂತ ಚಿಕ್ಕದಾದರೂ ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಮಾರ್ಗದಲ್ಲಿ ಇದು ಒಂದು ಮುಖ್ಯ ಹೆಜ್ಜೆಯೆಂಬುದಾಗಿ ಪರಿಗಣಿಸಲಾಗಿತ್ತು. ರಾಷ್ಟ್ರಕೂಟದ ಸದಸ್ಯ ರಾಷ್ಟ್ರಗಳಾಗದಿದ್ದ ಅಮೆರಿಕ ಸಂಯುಕ್ತಸಂಸ್ಥಾನ, ಜರ್ಮನಿ ಮತ್ತು ಸೋವಿಯೆತ್ ದೇಶ ಇದಕ್ಕೆ ಸಹಿ ಹಾಕಿದ್ದೂ ಈ ಆಶಾವಾದಕ್ಕೆ ಕಾರಣ. 

ಆದರೆ ಈ ಒಪ್ಪಂದ ಯಶಸ್ವಿಯಾಗಲಿಲ್ಲ. ಯುದ್ಧ ಬೇಡವೆಂಬ ಇಚ್ಛೆ ಉದಾತ್ತವಾಗಿದ್ದರೂ ಆಕ್ರಮಣಕಾರಿಗಳನ್ನು ಶಿಕ್ಷಿಸಲು ಇದರಲ್ಲಿ ಯಾವ ಉಪಾಯಗಳನ್ನೂ ಸೂಚಿಸಿರಲಿಲ್ಲ. ಸಹಿ ಹಾಕಿದ ರಾಷ್ಟ್ರಗಳ ಪರಮಾಧಿಕಾರಕ್ಕೆ ಯಾವ ಮಿತಿಯೂ ಇರಲಿಲ್ಲ. ಮುಂದಿನ ದಶಕದಲ್ಲಿ ತೀವ್ರವಾದ ರಾಜಕೀಯ ರಾಷ್ಟ್ರಾಭಿಮಾನದಿಂದಾಗಿ ಕೆಲಾಗ್ ಒಪ್ಪಂದಕ್ಕೆ ಅದರ ಕಾಗದದ ಬೆಲೆಯೂ ಇಲ್ಲವಾಯಿತು. ಅದರ ಸೂಚಕರಲ್ಲೊಬ್ಬನಾದ ಕೆಲಾಗನಿಗೆ 1929ರಲ್ಲಿ ನೊಬೆಲ್ ಶಾಂತಿ ಪಾರಿತೋಷಿಕ ಬಂದದ್ದೊಂದೇ ಈ ಒಪ್ಪಂದದಿಂದ ಆದ ಮುಖ್ಯವಾದ ಲಾಭ. (ಫ್ರೆಂಚ್ ಮಂತ್ರಿ ಬ್ರೀಯಾನನಿಗೆ 1926ರಲ್ಲೀ ಇದು ಲಭ್ಯವಾಗಿತ್ತು.)   

 (ವಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ